ಈ ಬ್ಯಾಂಕು ಆಧುನಿಕವಾಗಿ ಸುಸಜ್ಜಿತವಾಗಿದ್ದು ಎಲ್ಲಾ ಶಾಖೆಗಳು ಗಣಕೀಕೃತವಾಗಿರುತ್ತವೆ. ಬ್ಯಾಂಕು ಗ್ರಾಹಕರಿಗಾಗಿ ಇನ್ನೂ ಹೆಚ್ಚು ಸೌಲಭ್ಯ ಕಲ್ಪಿಸುವುದಕ್ಕೋಸ್ಕರ ಭದ್ರತಾ ಕಪಾಟುಗಳ ಸೌಲಭ್ಯ ಚಿನ್ನಾಭರಣಗಳ ಮೇಲಿನ ಸಾಲ, ವ್ಯಾಪಾರಕ್ಕಾಗಿ ನಗದುದ್ದರಿ ಸಾಲ ಸೌಲಭ್ಯ, ಮೀರಳತೆ ಸಾಲ ಸೌಲಭ್ಯ, ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಸಾಲ ಸೌಲಭ್ಯ ಹೀಗೆ ಹಲವಾರು ರೀತಿಯ ಸೌಲಭ್ಯಗಳನ್ನು ಗ್ರಾಹಕರಿಗೆ ಕಲ್ಪಿಸಿದೆ.
ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಹಾಗೂ ರಾಜ್ಯ / ರಾಷ್ಟ್ರ ಮಟ್ಟದ ಕ್ರೀಡಾ ರಂಗದಲ್ಲಿ ಉತ್ತಮ ಸಾಧನೆ ಮಾಡಿದ ಮೊದಲ ಮೂರು ಪ್ರತಿಭೆಯನ್ನು ಗುರುತಿಸಿ ಪ್ರತಿ ವರ್ಷ ಸನ್ಮಾನಿಸಲಾಗುತ್ತಿದೆ. ಹಿರಿಯ ನಾಗರೀಕ ಸದಸ್ಯರನ್ನು ಗುರುತಿಸಿ ಪ್ರತಿ ವರ್ಷ ಅವರನ್ನು ಸನ್ಮಾನಿಸಲಾಗುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರೀಕ ಸದಸ್ಯರಿಗೆ ವೈದ್ಯಕೀಯ ನಿಧಿಯನ್ನು ಸ್ಥಾಪಿಸಿ ಪ್ರಸಕ್ತ ಸಾಲಿನಿಂದ ಪಾವತಿಸಲಾಗುತ್ತಿದೆ. ಠೇವಣಿದಾರರ ಕುಂದು ಕೊರತೆ ಹಾಗೂ ಅವರ ಸಲಹೆ ಸೂಚನೆ ಪಡೆಯಲು ಪ್ರತಿ ವರ್ಷ ಠೇವಣಿದಾರರ ಸಮಾವೇಶ ನಡೆಸಲಾಗುತ್ತಿದೆ. ಇತರೆ ಬ್ಯಾಂಕುಗಳಿಗಿಂತ ಬ್ಯಾಂಕು ಠೇವಣಿಗಳ ಮೇಲೆ ಸ್ಪರ್ಧಾತ್ಮಕವಾಗಿ ಜಾಸ್ತಿ ಬಡ್ಡಿ ನೀಡುತ್ತಿದೆ. ಬ್ಯಾಂಕು ಐಡಿಬಿಐ ಮತ್ತು ಹೆಚ್.ಡಿ.ಎಫ್.ಸಿ ಬ್ಯಾಂಕುಗಳ ಸಹಯೋಗದೊಂದಿಗೆ ಡಿಡಿಗಳನ್ನು ಗ್ರಾಹಕರ ಅನುಕೂಲಕ್ಕಾಗಿ ನೀಡುತ್ತಿದೆ.
ಭಾರತೀಯ ರಿಸರ್ವ್ ಬ್ಯಾಂಕಿನ ಕಾರ್ಯಸೂಚಿಯಂತೆ ಸದಸ್ಯರ ಅನುಕೂಲಕ್ಕಾಗಿ ಕೋರ್ ಬ್ಯಾಂಕಿಂಗ್ ಸಲ್ಯೂಷನ್ಸ್ (ಸಿಬಿಸಿ) ಹಾಗೂ ಎಟಿಎಂ ಸೌಲಭ್ಯವನ್ನು ಅಳವಡಿಸುವ ಬಗ್ಗೆ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು ಸದ್ಯದಲ್ಲಿ ಪೂರ್ಣಗೊಳಿಸಲಾಗುವುದು. ಹೊಸ ಶಾಖೆಗಳನ್ನು ಪ್ರಾರಂಭಿಸಲು ಕಾರ್ಯಾನ್ಮುಖರಾಗಿರುವುದನ್ನು ಈ ಸಂದರ್ಭದಲ್ಲಿ ತಿಳಿಸಲು ಇಚ್ಚಿಸುತ್ತೇವೆ.